ಪೋರ್ಟ್ ಆಫ್ ಸ್ಪೇನ್ -
ವೆಸ್ಟ್ ಇಂಡೀಸಿನ ಟ್ರಿನಿಡಾಡ್ ಮತ್ತು ಟೊಬ್ಯಾಗೋ ದ್ವೀಪಗಳ ಮುಖ್ಯ ಪಟ್ಟಣ. ಟ್ರಿನಿಡಾಡ್ ದ್ವೀಪದ ವಾಯವ್ಯ ಭಾಗದಲ್ಲಿ, ಪರೀಯ ಕೊಲ್ಲಿಯಲ್ಲಿ ಉ.ಅ. 10039' ಮತ್ತು ಪೂ.ರೇ. 61031' ಮೇಲೆ ಇದೆ. ಇದೊಂದು ಅತ್ಯಂತ ಸುರಕ್ಷಿತವಾದ ರೇವು ಪಟ್ಟಣ; ಆಂತರ ರಾಷ್ಟ್ರೀಯ ವಾಯು ಮತ್ತು ಜಲ ಮಾರ್ಗಗಳ ಸಂಧಿ ಸ್ಥಳ; ವಾಣಿಜ್ಯ ಮತ್ತು ವಿದ್ಯಾ ಕೇಂದ್ರ. ಜನಸಂಖ್ಯೆ 59,649 (2001).

ಇಲ್ಲಿಂದ ಸಕ್ಕರೆ, ಕೋಕೋ, ತೆಂಗು, ಕೆಂಪು ಮೂಲಂಗಿ, ಹಣ್ಣಿನ ರಸ, ಮದ್ಯ, ಔಷಧ, ಪೆಟ್ರೋಲಿಯಮ್, ಗ್ಯಾಸೋಲಿನ್, ಸಿಗರೇಟು - ಇವು ದಕ್ಷಿಣ ಅಮೆರಿಕದ ಉತ್ತರ ಕರಾವಳಿಯ ದೇಶಗಳಿಗೆ ರಫ್ತಾಗುತ್ತವೆ. ಆಹಾರ ಧಾನ್ಯ, ಹತ್ತಿ, ಜವಳಿ, ಗೊಬ್ಬರ ಪ್ರಮುಖ ಆಮದು ಸರಕುಗಳು.

ರಾಯಲ್ ವಿಕ್ಟೋರಿಯ ಸಂಸ್ಥೆ, ರಾಯಲ್ ಸಸ್ಯಶಾಸ್ತ್ರೀಯ ಉದ್ಯಾನ, ರೋಮನ್ ಕ್ಯಾತೊಲಿಕ್ ಕ್ರೈಸ್ತ ಮಂದಿರ, ಶ್ವೇತ ಭವನ, ಶಿಕ್ಷಣ ಸಂಸ್ಥೆಗಳಾದ ಮಹಾರಾಣಿ ರಾಯಲ್ ಕಾಲೇಜ್, ಫಾತಿಮಾ ಕಾಲೇಜ್, ಸೇಂಟ್ ಮೆರೀಸ್ ಕಾಲೇಜ್, ಇಂಜನಿಯರಿಂಗ್ ಕಾಲೇಜ್, ಕೃಷಿ ವಿಶ್ವವಿದ್ಯಾಲಯ - ಮುಂತಾದವು ನಗರದ ಸಾಮಾಜಿಕ ಮತ್ತು ಸಾಂಸ್ಕøತಿಕ ಮಟ್ಟವನ್ನು ಹೆಚ್ಚಿಸಿವೆ. ಕೊಲಂಬಸ್ ಸ್ಮಾರಕ ಮಂದಿರ ಇಲ್ಲಿಯ ಇನ್ನೊಂದು ಚೆಲುವುದಾಣ. ಈ ನಗರ ಒಂದು ಪ್ರವಾಸಿ ಕೇಂದ್ರವೂ ಆಗಿದೆ. 1970 ರಿಂದ ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹೊಂದುತ್ತ ಬಂದಿದೆ. 

ಇಲ್ಲಿ ರೈಲ್ವೇ ಕಾರ್ಯಾಗಾರ, ಹಡಗು ದುರಸ್ತಿ, ಮೋಟಾರು ಜೋಡಣೆ ಮುಂತಾದ ಅನೇಕ ಉದ್ಯಮಗಳಿವೆ. ದೇಶದ ಉಳಿದ ಭಾಗಗಳೊಂದಿಗೆ ಉತ್ತಮ ಸಾರಿಗೆ ಸಂಪರ್ಕ ಹೊಂದಿರುವ ಈ ನಗರದಲ್ಲಿ ಬಾನುಲಿ ಕೇಂದ್ರವಿದೆ. ಇಲ್ಲಿಂದ ಅನೇಕ ದಿನಪತ್ರಿಕೆಗಳು ಪ್ರಕಟವಾಗುತ್ತವೆ. ಇಲ್ಲಿಂದ ಪೂರ್ವಕ್ಕೆ ಸುಮಾರು 26 ಕಿ.ಮೀ. ದೂರದಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಿದೆ. 										(ವಿ.ಎಸ್.ಬಿ.ಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ